ರಸ್ತೆಗೆ
ಬೇಕೆ ಬಣ್ಣ
ಬಣ್ಣದ ರಂಗೋಲಿ?
ರಂಗೋಲಿ ಗೃಹಾಲಂಕಾರದ ಒಂದು ಜಾನಪದ ಕಲೆ. ಸ್ತ್ರೀಯರ ಕಲಾ ನೈಪುಣ್ಯ ಮತ್ತು ಕಲ್ಪನಾಶಕ್ತಿಯ ಪ್ರತೀಕ. ರಂಗ ಎಂದರೆ ಕೃಷ್ಣ. ಒಲಿ ಎಂದರೆ ಅನುಗ್ರಹಿಸು. ಭಗವಂತನ ಅನುಗ್ರಹಕ್ಕಾಗಿ ರೂಪತಾಳಿದ ಕಲೆಯೇ ರಂಗವಲ್ಲಿ.
ರಂಗೋಲಿಯು ಶುಭಕಾರ್ಯಕ್ಕೆ ಸಂಕೇತವಾಗಿದ್ದು ಅದು ಸ್ಥಿರತೆಯನ್ನು ಸೂಚಿಸುತ್ತದೆ. ಅಧ್ಯಾತ್ಮಿಕ ದೃಷ್ಟಿಕೋನದಲ್ಲಿ ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಮತ್ತು ಸಾರಿಸುವಾಗ ನೆಲದ ಮೇಲೆ ಸೂಕ್ಷ್ಮರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಋಣಾತ್ಮಕ ಅಂಶಗಳು ಹೊರಹೊಮ್ಮುತ್ತವೆ. ಇವು ಮಾನವನ ಶರೀರಕ್ಕೆ ಹಾನಿಕಾರಿಯಾಗಿದ್ದು, ಅವುಗಳನ್ನು ತಡೆಗಟ್ಟಲು ಸಗಣಿಯಿಂದ ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಶುಭಚಿಹ್ನೆಗಳನ್ನು ಬಿಡಿಸುತ್ತಾರೆ ಇದರಿಂದ ಶುಭ ಪರಿಣಾಮಗಳು ಪ್ರಾಪ್ತವಾಗುತ್ತವೆ.
ಹಿಂದಿನ ಕಾಲದಲ್ಲಿ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕುವ ವಾಡಿಕೆ ಇತ್ತು. ನೆಲದಲ್ಲಿದ್ದ ಸೂಕ್ಷ್ಮ ಜೀವಿಗಳು ಆಹಾರಕ್ಕಾಗಿ ಮನೆಯನ್ನು ಪ್ರವೇಶಿಸುವ ಬದಲಾಗಿ ಅವುಗಳಿಗೆ ಆಹಾರ ತಲಬಾಗಿಲಿನಲ್ಲೆ ದೊರಕುತಿತ್ತು. ಆಗ ಅವು ಮನೆಯನ್ನು ಪ್ರವೇಶಿಸುವುದಿಲ್ಲ ಮತ್ತು ಸೂಕ್ಷ್ಮ ಜೀವಿಗಳಿಗೂ ಆಹಾರ ನೀಡಿದಂತಾಗುವುದು ಎಂಬ ನಂಬಿಕೆ ಇದೆ.
ಒಬ್ಬ ಮನುಷ್ಯನ ದೇಹಕ್ಕೆ ತಲೆ ಹೇಗೆ ಶ್ರೇಷ್ಠ ಭಾಗವೋ ಹಾಗೆಯೇ ಮನೆಗೆ ಹೊಸ್ತಿಲು ಶ್ರೇಷ್ಠವಾದದ್ದು. ಆದುದರಿಂದ ಇದನ್ನು ತಲೆಬಾಗಿಲು ಎಂದು ಕರೆಯುತ್ತಾರೆ. ರಂಗೋಲಿಯನ್ನು ಮನೆಯ ಶ್ರೇಷ್ಠಭಾಗವಾದ ತಲೆಬಾಗಿಲಿನ ಅಂಗಳದಲ್ಲಿ ಹಾಕುವುದು ಉತ್ತಮ. ಇನ್ನು ನಿಖರವಾಗಿ ಅಂಗಳ ಎಂದರೆ ತಲೆಬಾಗಿಲು ಮತ್ತು ಮುಖ್ಯದ್ವಾರದ ಮಧ್ಯೆ ಇರುವ ಸ್ಥಳ. ಹಾಗಾಗಿ ಹೊಸ್ತಿಲಿನ ಮುಂಭಾಗದಲ್ಲಿಯೇ ರಂಗೋಲಿಯನ್ನು ಹಾಕುವುದು ಸಂಪ್ರದಾಯವಾಗಿದೆ. ಹೀಗೆ ರಂಗೋಲಿಯನ್ನು ಹಾಕುವುದರಿಂದ ದುಷ್ಟ ಶಕ್ತಿಗಳು, ಕ್ರಿಮಿಕೀಟಗಳು ಮನೆಯನ್ನು ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾಗಿ ಸೂರ್ಯೋದಯಕ್ಕೆ ಮೊದಲೇ ರಂಗೋಲಿಯನ್ನು ಹಾಕಿ, ಮಧ್ಯದಲ್ಲಿ ಅರಿಶಿಣ ಕುಂಕುಮ ಮುಂತಾದ ಮಂಗಳದ್ರವ್ಯಗಳನ್ನು ಇಡುವುದು ಪರಂಪರೆಯಿಂದಲೂ ನಡೆದು ಬಂದ ಸಂಪ್ರದಾಯ.
ಆದರೆ ಇತ್ತೀಚಿನ ದಿನಗಳಲ್ಲಿ ರಂಗೋಲಿಯನ್ನು ತಲಬಾಗಿಲು ಮತ್ತು ಅಂಗಳವನ್ನು ಬಿಟ್ಟು ರಸ್ತೆಯಲ್ಲಿ ಹಾಕುತ್ತಿದ್ದಾರೆ. ಇಂತಹ ರಂಗೋಲಿ ಮತ್ತು ಅದನ್ನು ಹಾಕುವವರು ಬೆಳಗಿನ ಸಮಯದಲ್ಲಿ ಓಡಾಡುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಕಿರಿಕಿರಿಯನ್ನು ಮಾಡುವುದು ಕಂಡುಬರುತ್ತಿದೆ.
ರಂಗೋಲಿ ಭಗವಂತನ ಅನುಗ್ರಹಕ್ಕಾಗಿ ರೂಪತಾಳಿದೆ. ಇದನ್ನು ತುಳಿಯುವುದರಿಂದ ಹಾಕಿದವರಿಗೂ ಮತ್ತು ತುಳಿದವರಿಗೂ ಪಾಪ ಪ್ರಜ್ಞೆ ಮೂಡುತ್ತದೆ. ಮೂವತ್ತು ಅಡಿ ರಸ್ತೆಯಲ್ಲಿ ಒಂಭತ್ತು ಅಡಿ ರಂಗೋಲಿಯನ್ನು ಹಾಕಿದರೆ ಆಚಾರ ಅತಿರೇಕವೆನಿಸಿಕೊಳ್ಳುತ್ತದೆ.
ಆದುದರಿಂದ ನಮ್ಮ ರಂಗೋಲಿ ಪ್ರದರ್ಶನವನ್ನು ನಮ್ಮ ಮನೆಯ ಅಂಗಳಕ್ಕೆ ಮಾತ್ರ ಸೀಮಿತಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಲಬಾಗಿಲಿನ ಮುಂದೆಯೇ ಚಿಕ್ಕದಾಗಿ ಸಂಪ್ರದಾಯಕ್ಕೂ ಚ್ಯುತಿ ಬಾರದಂತೆ, ದೇವರ ಅನುಗ್ರಹ ಪಡೆಯುವಂತಿರಲಿ ಎನ್ನುವುದು ನಮ್ಮ ಆಶಯ.